ಕೊಂಡ ಮಾವುಕಾಮಿಫೋರ ಕಾಡೇಟ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಣ್ಣಗಾತ್ರದ ಮರ. ಬೆಟ್ಟಮಾವು ಪರ್ಯಾಯನಾಮ. ಗುಗ್ಗುಳಮರದ (ಕಾಮಿಫೋರ ಮುಕುಲ್ ಪ್ರಭೇದ) ಹತ್ತಿರ ಸಂಬಂಧಿ. ಬರ್ಸರೇಸೀ ಕುಟುಂಬಕ್ಕೆ ಸೇರಿದೆ. == ಭೌಗೋಳಿಕ == ಏಷ್ಯ ಮತ್ತು ಆಫ್ರಿಕಗಳ ಮೂಲ ವಾಸಿಯಾದ ಇದು ದಕ್ಷಿಣ ಭಾರತದಲ್ಲೆಲ್ಲ ಬಲುಸಾಮಾನ್ಯ. ಶೀಘ್ರವಾಗಿ ಮತ್ತು ಯಾವ ಬಗೆಯ ಆರೈಕೆಯ ಅಗತ್ಯವಿಲ್ಲದೆ ಬೆಳೆಯುವುದರಿಂದ, ಇದನ್ನು ತೋಟಗಳಲ್ಲಿ, ರಸ್ತೆಗಳ ಬದಿಗಳಲ್ಲಿ, ಬೇಲಿಗಳಲ್ಲಿ ಬೆಳೆಸುವುದಿದೆ. ಕಾಂಡತುಂಡುಗಳನ್ನು ನೆಟ್ಟು ಇದನ್ನು ಬೆಳೆಸುವುದೇ ವಾಡಿಕೆಯಲ್ಲಿರುವ ಕ್ರಮ. == ಲಕ್ಷಣಗಳು == ಮಧ್ಯಮ ಪ್ರಮಾಣದ ಮರ.ಕೆಲವು ೧೫ರಿಂದ ೨೦ ಮೀಟರ್ ಬೆಳೆದರೂ ಸಾಮಾನ್ಯವಾಗಿ ಮಧ್ಯಮ ಪ್ರಮಾಣದ ಮರ. ಕೊಂಡಮಾವಿನ ತೊಗಟೆ ಬಹಳ ನವುರಾಗಿದ್ದು ಕಾಗದವನ್ನು ಹೋಲುತ್ತದೆ. ಎಲೆ ಹಾಗೂ ಮರದ ತೊಗಟೆಗಳಿಗೆ ಮಾವಿನಹಣ್ಣಿನ ವಾಸನೆಯಿದೆ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದರಲ್ಲೂ 2-5 ಜೋಡಿ ಕಿರು ಎಲೆಗಳಿವೆ. ಎಲೆಗಳ ಜೋಡಣೆ ಪರ್ಯಾಯ ಮಾದರಿಯದು. ಹೂಗಳೂ ಸಂಕೀರ್ಣ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದು ಹೂವಿನಲ್ಲೂ ಸಾಮಾನ್ಯವಾಗಿ 4 ಪುಷ್ಪಪತ್ರಗಳು, 4 ದಳಗಳು, 8-10 ಕೇಸರಗಳು, ಉಚ್ಚಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ 2-4 ಕೋಣೆಗಳಿದ್ದು ಒಂದೊಂದರಲ್ಲೂ 2 ಅಂಡಕಗಳಿವೆ. ಫಲ ಅಷ್ಟಿಫಲ ಮಾದರಿಯದು. ಗಾತ್ರ ಬಟಾಣಿ ಕಾಳಿನಷ್ಟು. == ಉಪಯೋಗಗಳು == ಇದರ ಕಾಯಿಯಿಂದ ಉಪ್ಪಿನಕಾಯಿ ಹಾಕುತ್ತಾರೆ. ಈ ಮರದಿಂದ ಗೋಂದು ಮಿಶ್ರಿತ ರೆಸಿನ್ ವಸ್ತುವನ್ನು ಪಡೆಯಬಹುದಾಗಿದ್ದು ಅದನ್ನು ಧೂಪದಂತೆ ಬಳಸುವುದುಂಟು. == ಉಲ್ಲೇಖಗಳು ==